ನಾವು ಪ್ರತಿಪಕ್ಷ ಆಗಿರಬಹುದು ಆದ್ರೆ ಉಗ್ರರ ದಾಳಿ ವಿಚಾರದಲ್ಲಿ ಮೋದಿ ಪರ ! ಕಾಂಗ್ರೆಸ್​​ ರಾಜಕೀಯ ಮಾಡಲ್ಲ

0
388

ಭಾರತ ಸಿಆರ್​ಪಿಎಫ್​​ ಯೋಧರ ಸಾವು ಅತ್ಯಂತ ದುಃಖಕರ. ಇಲ್ಲಿ ಕಾಂಗ್ರೆಸ್​​ ರಾಜಕೀಯ ಮಾಡುತ್ತಿಲ್ಲ. ಯಾವುದೇ ಪಕ್ಷವೂ ಈಗ ರಾಜಕೀಯ ಮಾಡುವ ಸಂದರ್ಭದಲ್ಲಿಲ್ಲ. ಸೈನಿಕರ ಮೇಲಿನ ಉಗ್ರರ ದಾಳಿ ಖಂಡನೀಯ. ಕೇಂದ್ರ ಸರ್ಕಾರದ ಜತೆಗೆ ನಾವಿದ್ದೇವೆ. ಪ್ರಧಾನಿ ಮೋದಿ ಸರ್ಕಾರ ಈ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಿ, ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿಯವರು ಭರವಸೆ ನೀಡಿದ್ಧಾರೆ.

ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾರತದ 40ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ. ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ್ದು ಖಂಡನೀಯ. ದೇಶದ ಇತಿಹಾಸದಲ್ಲಿಯೇ ಇದು ಅತ್ಯಂತ ದುಃಖಕರ ಸಂಗತಿ. ಭಯೋತ್ಪಾದನೆ ದೇಶವನ್ನು ವಿಭಜಿಸುತ್ತಿದೆ. ನಾವು ಈ ವಿಭಜನೆಯನ್ನು ವಿರೋಧಿಸುತ್ತೇವೆ. ಯಾರಿಂದಲೂ ದೇಶದ ವಿಭಜನೆ ಸಾಧ್ಯವಿಲ್ಲ. ಎಲ್ಲಾ ವಿಪಕ್ಷಗಳು ಸೈನಿಕರ ಜೊತೆಗಿವೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನಾವು ಬದ್ದವಾಗಿದ್ದೇವೆ ಎಂದರು.

ಇಂದು ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​ ಗಾಂಧಿ ಸುದ್ದಿಗೋಷ್ಠಿ ಕರೆದಿದ್ದಾರೆ. ಇಲ್ಲಿ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವ ಮೂಲಕ 2 ನಿಮಿಷ ಶ್ರದ್ದಾಂಜಲಿ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್​​, ಇಂತಹ ಕರಾಳ ಘಟನೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು. ಇದೇ ವೇಳೆ ರಾಹುಲ್​​ ಜತೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎ.ಕೆ. ಆಂಟನಿ, ಗುಲಾಂ ನಭಿ ಆಜಾದ್ ಉಪಸ್ಥಿತರಿದ್ದರು.

ಮಾಜಿ ಪ್ರಧಾನಿ ಮನಮೋಹನ್​​ ಸಿಂಗ್​ ಅವರು ಕೂಡ ಸೈನಿಕರ ಮೇಲಿನ ದಾಳಿ ಖಂಡಿಸಿದ್ದಾರೆ. ಇನ್ನು ನನಗೆ ಈ ಭಯೋತ್ಪಾದನಾ ದಾಳಿಯಿಂದ ನೋವಾಗಿದೆ. ಸೈನಿಕರ ಕುಟುಂಬದೊಂದಿಗೆ ನಾವಿರುತ್ತೇವೆ. ಈ ಸಮಯದಲ್ಲಿ ನಾವು ಸರ್ಕಾರದ ಜತೆಗೆ ಇರಬೇಕಾದದ್ದು ನಮ್ಮ ಕರ್ತವ್ಯ. ಇಂಥ ಭಯೋತ್ಪಾದನೆ ವಿಷಯದಲ್ಲಿ ರಾಜಿಯೇ ಇಲ್ಲ. ಬೇರೆ ವಿಷಯಗಳ ಚರ್ಚೆಗೂ ಅವಕಾಶ ಇಲ್ಲ. ಸಂಪೂರ್ಣವಾಗಿ ಸೈನಿಕರ ಜೊತೆಗಿರುತ್ತೇವೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here