ಮೇಲ್ಜಾತಿಗಳ ಬಡವರಿಗೆ ಮೀಸಲಾತಿ ಸಂವಿಧಾನಬದ್ಧವಲ್ಲ..!

0
147

ಮೇಲ್ಜಾತಿಗಳ ಬಡವರಿಗೆ ಮೀಸಲಾತಿ ಎನ್ನುವುದು ಸಂವಿಧಾನಬದ್ಧವಲ್ಲ. ಏಕೆಂದರೆ ಮೀಸಲಾತಿಯ ಉದ್ದೇಶ ಆರ್ಥಿಕ ಸೌಲಭ್ಯ ಹಂಚಿಕೆ ಅಲ್ಲ. ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಇಡೀ ಸಮಾಜದ ಎಲ್ಲಾ ಜನವರ್ಗಗಳಿಗೆ ಸಮಾನ ಪ್ರಾತಿನಿಧ್ಯ (equal representation) ನೀಡುವುದು ಮೀಸಲಾತಿಯ ಉದ್ದೇಶ. ಮೀಸಲಾತಿಗೆ ಮೊದಲು ಎಲ್ಲಾ ರಂಗದಲ್ಲಿ ಮೇಲ್ಜಾತಿ ಜನರೇ ಇದ್ದ ಕಾರಣಕ್ಕೆ ಈ ಮೀಸಲಾತಿ ಜಾರಿಗೆ ತರಬೇಕಾಯಿತು. ಇದು ಜಾರಿಗೆ ಬಂದ ಮೇಲೂ ಸಹ ಇನ್ನೂ ಮೀಸಲಾತಿ ಪದವೂ ಕೇಳದ, ಎಲ್ಲೂ ಪ್ರಾತಿನಿಧ್ಯ ಪಡೆಯದ ನೂರಾರು ಜನ ಜನಜಾತಿಗಳಿವೆ. ಈ ಕಾರಣದಿಂದಾಗಿಯೇ 2008 ರಲ್ಲಿ ನೇಮಕವಾಗಿದ್ದ ಬಾಲಕೃಷ್ಣ ರೇಣಕೆ ಆಯೋಗವು DNT (ಅಲೆಮಾರಿ – ಅರೆ ಅಲೆಮಾರಿ ಬುಡಕಟ್ಟು) ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನೀಡಲು ಮೀಸಲಾತಿ ತಿದ್ದುಪಡಿ ಮಾಡಲು ಶಿಫಾರಸು ಮಾಡಿದ್ದರೆ ಆಂಧ್ರದಲ್ಲಿ ನೇಮಿಸಿದ್ದ ಉಷಾ ಮೆಹ್ರ ಸಮಿತಿ ಪರಿಶಿಷ್ಟರಲ್ಲಿ ಒಳ ಮೀಸಲಾತಿಗೆ ಸಂವಿಧಾನ ತಿದ್ದುಪಡಿ ಮಾಡಿ ಎಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಆದರೆ ಈ ಎರಡೂ ಶಿಫಾರಸುಗಳನ್ನು ಮುಕುಳಿ ಅಡಿಯಲ್ಲಿ ಇಟ್ಟುಕೊಂಡಿರುವ ಕೇಂದ್ರ ಸರ್ಕಾರ ಮೀಸಲಾತಿ (ಪ್ರಾತಿನಿಧ್ಯ) ವಂಚಿತ ಸಮುದಾಯಗಳತ್ತ ನೋಡುವ ಬದಲು ಮೇಲ್ಜಾತಿ ಬಡವರ ಪಾಲಿನ ‘ಕರುಣಾಳು’ ಆಗಲು ಹೊರಟಿದೆ..‌

ವಾಸ್ತವವಾಗಿ ಮೀಸಲಾತಿ ಒಂದು ಆರ್ಥಿಕ ಸೌಲಭ್ಯ ಎಂದು ಪರಿಗಣಿಸಿ ಮೇಲ್ಜಾತಿ ಬಡವರಿಗೆ 10% ಮೀಸಲಾತಿ ನೀಡುವುದು ಮೀಸಲಾತಿಯ ಉದ್ದೇಶವನ್ನೇ ತಿರುಚುವ ಕೆಲಸ. ಇದರಿಂದ ಮೀಸಲಾತಿ ಒಂದು ಪ್ರಾತಿನಿಧ್ಯದ ವ್ಯವಸ್ಥೆ ಎಂಬುದರ ಬದಲಿಗೆ ಒಂದು ಸೌಲಭ್ಯ ವ್ಯವಸ್ಥೆ ಎಂಬ ಭಾವನೆ ಜನರಲ್ಲಿ ಗಟ್ಟಿ ಆಗಲಿದೆ. ಕೇಂದ್ರದ ಉದ್ದೇಶವೂ ಇದೇ ಆಗಿದೆ.‌

ಹಾಗಂತ ಮೇಲ್ಜಾತಿ ಬಡವರಿಗೆ ಅವಕಾಶಗಳು ಸಿಗಬಾರದೆಂದಲ್ಲ. ಮೇಲ್ಜಾತಿ ಗಳಲ್ಲಿ ಸಹ ದುಬಾರಿ ಶಿಕ್ಷಣ ಭರಿಸಲಾಗದ, ಉದ್ಯೋಗ ಸಿಗದ ಅವಕಾಶ ವಂಚಿತರಿದ್ದಾರೆ. ಅವರಿಗೂ ಶಿಕ್ಷಣ, ಉದ್ಯೋಗ ಸಿಗಬೇಕು. ಅವರಿಗೂ ಅವಕಾಶ ಸಿಗಬೇಕೆಂದರೆ ಸರ್ಕಾರಗಳು ಉದ್ಯೋಗ ಹೆಚ್ಚಿಸಬೇಕು, ಶಿಕ್ಷಣದ ರಾಷ್ಟ್ರೀಕರಣ ಮಾಡಬೇಕು. ಇದಕ್ಕೆ ಸರ್ಕಾರ ತಯಾರಿದೆಯೇ?

ಈಗ ಕೇಂದ್ರ ಸರ್ಕಾರ ಘೋಷಿಸಿರುವ 10% ಮೀಸಲಾತಿ ಸ್ಕೀಮಿನಲ್ಲಿ ಯಾರಾದರೂ ಮೇಲ್ಜಾತಿ ಬಡವರು ತಮಗೆ ಅವಕಾಶ ಸಿಗುತ್ತದೆ ಎಂದುಕೊಂಡರೆ ಅದು ಅವರ ಭ್ರಮೆ ಮಾತ್ರ. ಯಾಕೆಂದರೆ ಆ 10% ಮೀಸಲಾತಿ ಬಹುತೇಕ ಮೇಲ್ಜಾತಿ ಮಧ್ಯಮ ವರ್ಗದವರ ಮತ್ತು ಶ್ರೀಮಂತರ ಪಾಲಾಗಲಿದೆ. ಆದಾಯ ಮಿತಿ 8 ಲಕ್ಷ, 5 ಎಕರೆ ಜಮೀನು ಇರುವುದರಿಂದ ಇದು ಮೇಲ್ಜಾತಿ ಬಡವರಿಗಿಂತಲೂ ಮೇಲ್ಜಾತಿ ಮಧ್ಯಮ ವರ್ಗದವರನ್ನು ಓಲೈಸುವ ಸ್ಕೀಮಾಗಿದೆ. ಹಾಗೆಯೇ ಶ್ರೀಮಂತರೂ ಫೇಕ್ ಆದಾಯ ಪ್ರಮಾಣ ಪತ್ರ ಮಾಡಿಸುವುದು ಬಹಳ ಸುಲಭವಾದ್ದರಿಂದ ಇದು ಮೇಲ್ಜಾತಿ ಶ್ರೀಮಂತರಿಗೂ ಅನುಕೂಲಕರ ಸ್ಕೀಮು. ಮೇಲ್ಜಾತಿ ಬಡವರ ಹೆಸರಿನಲ್ಲಿ ಅವರನ್ನು ಯಾಮಾರಿಸುವ ಮಾಸ್ಟರ್ ಗಿಮಿಕ್ ಅಲ್ಲದೇ ಬೇರೇನಲ್ಲ.

ಈ ಸ್ಕೀಮು ಜಾರಿಯಾಗಲು ಬಹಳ ದೀರ್ಘ ಪ್ರಕ್ರಿಯೆ ಅಗತ್ಯವಿದೆ. ಇದಕ್ಕಾಗಿ ಸಂವಿಧಾನ ತಿದ್ದುಪಡಿ ಆಗಬೇಕು. ಸುಪ್ರೀಂ ಕೋರ್ಟ್ ಸಹ ಒಪ್ಪದಿರಬಹುದು. ಅಂತಿಮವಾಗಿ ಇಡೀ ಸ್ಕೀಮು ನೆನೆಗುದಿಗೆ ಬೀಳಬಹುದು. ಆದರೆ ಇನ್ನಾರು ತಿಂಗಳಲ್ಲಿ ಘೋಷಣೆಯಾಗುವ ಚುನಾವಣೆ ಒಳಗೆ ಮೋದಿಗೆ ಆದಷ್ಟು ಲಾಭ ಆಗಲಿ ಎಂಬುದಷ್ಟೇ ಇಲ್ಲಿರುವ ಹಿತಾಸಕ್ತಿ. ಅಷ್ಟಕ್ಕೂ ಮೋದಿಯವರಿಗೆ ಚುನಾವಣೆ ಬಂದಾಗಲೇ ಮೇಲ್ಜಾತಿ ಬಡವರು ನೆನಪಾದದ್ದು ದೊಡ್ಡ ಸೋಜಿಗವೇ ಬಿಡಿ!

LEAVE A REPLY

Please enter your comment!
Please enter your name here