ನನ್ನ ನಾಮಪತ್ರ ತಿರಸ್ಕಾರದ ಹಿಂದೆ ಮೋದಿ ಆಪ್ತರ ಕೈವಾಡ; ಮಾಜಿ ಯೋಧ ತೇಜ್​​ ಬಹದ್ದೂರ್​​ ಆರೋಪ ! ವೈರಲ್ ವಿಡಿಯೋ

0
304

ನವದೆಹಲಿ(ಮೇ.02): ಉತ್ತರಪ್ರದೇಶದ ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸಲ್ಲಿಸಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಅವರ ನಾಮಪತ್ರ ತಿರಸ್ಕೃತವಾಗಿದೆ. ಕೇಂದ್ರ ಚುನಾವಣೆ ಆಯೋಗ ನಾಮಪತ್ರ ತಿರಸ್ಕರಿಸಿದ ಕೆಲವೇ ಹೊತ್ತಲ್ಲಿ ತೇಜ್​​ ಬಹದ್ದೂರ್​​ ಯಾದವ್​​ ಅವರು, ತಮ್ಮ ಅಭಿಪ್ರಾಯವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಮಾಜಿ ಯೋಧ ಮಾತಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಅಲ್ಲದೇ ತಮ್ಮ ನಾಮಪತ್ರ ತಿರಸ್ಕರಿಸುವಂತೆ ಯಾರೋ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆಂದು ತೇಜ್​​ ಬಹದ್ದೂರ್​​ ವಿಡಿಯೋದಲ್ಲಿ ಆರೋಪಿಸಿದ್ಧಾರೆ.

ವಾರಣಾಸಿ ಜಿಲ್ಲಾಧಿಕಾರಿ ತನಗೆ ಬೇಕಾದಂತೆ ಕಾನೂನು ಬದಲಿಸಿಕೊಂಡಿದ್ದಾರೆ. ನನ್ನ ನಾಮಪತ್ರ ತಿರಸ್ಕರಿಸಲು ಭಾರೀ ಷಡ್ಯಂತ್ರ ಹೂಡಲಾಗಿದೆ. ಮೊದಲು ಮಧ್ಯಾಹ್ನ 3 ಗಂಟೆ ವೇಳೆಗೆ ತಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆ ಜಿಲ್ಲಾಧಿಕಾರಿ ನನಗೆ ನೋಟಿಸ್ ಕಳಿಸಿದ್ದರು. ಬಳಿಕ ನಾವು ಕೂಡಲೇ ನಮ್ಮ ವಕೀಲರು ಉತ್ತರಿಸುತ್ತಾರೆ ಎಂದು ಪ್ರತಿಕ್ರಿಯಿಸಿದೆವು. ಆದರೆ, ಮತ್ತೆ ಸಂಜೆ 6 ಗಂಟೆಗೆ ನೋಟಿಸ್​​ ಕಳಿಸಿದ ಅವರು, ದೆಹಲಿಗೆ ಹೋಗಿ ಚುನಾವಣಾ ಆಯೋಗದಿಂದ ನಿರಪೇಕ್ಷಣಾ ಪತ್ರ ತರಬೇಕು. ಅಲ್ಲದೇ ರಾತ್ರಿ 11 ಗಂಟೆಯೊಳಗೆ ನಮಗೆ ನೀಡಬೇಕು ಎಂದು ಸೂಚಿಸಿದ್ದರು ಎಂದು ತೇಜ್​​ ಬಹದ್ದೂರ್​​ ಆರೋಪಿಸಿದ್ಧಾರೆ.

ಹೀಗೆ ಮಾತು ಮುಂದುವರೆಸಿದ ಮಾಜಿ ಯೋಧರು, ಏಪ್ರಿಲ್​​​ 24 ರಂದೇ ನಾವು ಎಲ್ಲಾ ದಾಖಲೆ ಸಮೇತ ನಾಮಪತ್ರ ಸಲ್ಲಿಸಿದ್ದೆವು. ಅದರಲ್ಲಿ ಅಫಿಡವಿಟ್ ಕೂಡ ಇತ್ತು. ನನ್ನ ಎಲ್ಲಾ ದಾಖಲೆ ಸರಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು. ಬಳಿಕ ನಾನು ಅಧಿಕೃತವಾಗಿ ಏಪ್ರಿಲ್​​ 29ಕ್ಕೆ ಮತ್ತೆ ನಾಮಪತ್ರ ಸಲ್ಲಿಸಿದಾಗಲೂ ಯಾವುದೇ ಆಕ್ಷೇಪ ಇರಲಿಲ್ಲ. ಯಾವಾಗ ಮೋದಿ ಆಪ್ತರು ಬಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿದರೋ, ಆಗ ನನ್ನ ನಾಮಪತ್ರ ತಿರಸ್ಕಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ನಾನು ಆಯೋಗದ ನಡೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋಗುತ್ತೇನೆ. ಇದು ಸತ್ಯ ಮತ್ತು ಸುಳ್ಳಿ ನಡುವಿನ ಹೋರಾಟವಾಗಿದೆ. ಮೋದಿ ಸರ್ಕಾರದ ಷಡ್ಯಂತ್ರದ ವಿರುದ್ಧ ಹೋರಾಡಲು ನೀವು ನನ್ನ ಜತೆ ಕೈಜೋಡಿಸಬೇಕಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಇದಾಗಿದೆ. ನಾವು ನೀವೆಲ್ಲರೂ ಸೇರಿ ಸರ್ಕಾರವನ್ನು ಪ್ರಶ್ನಿಸಬೇಕಿದೆ. ಹಾಗಾಗಿ ನನ್ನ ಜತೆ ಕೈಜೋಡಿಸಿ ಎಂದು ವಿಡಿಯೋದಲ್ಲಿ ಮಾಜಿ ಯೋಧರು ಮನವಿ ಮಾಡಿದ್ದರು.

ಸದ್ಯ ಮಾಜಿ ಯೋಧರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಚುನಾವಣೆ ಆಯೋಗದ ನಡೆಗೆ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here