ಹೂವಿನ ಬದಲು ಈರುಳ್ಳಿ-ಬೆಳ್ಳುಳ್ಳಿ ಹಾರ ಬದಲಾಯಿಸಿಕೊಂಡ ನವಜೋಡಿ

0
9

ಪ್ರಸ್ತುತ ಭಾರತೀಯ ಮಾರುಕಟ್ಟೆಗಳಲ್ಲಿ ಗಗನಮುಖಿಯಾಗಿರುವ ಈರುಳ್ಳಿ ಗ್ರಾಹಕರ ಕಣ್ಣೀರಿಗೆ ಕಾರಣವಾಗಿದೆ. ಹೀಗಾಗಿ ಮದುವೆ ಮೂಲಕವೇ ಉತ್ತರ ಪ್ರದೇಶದ ನವಜೋಡಿ ವಿನೂತನವಾಗಿ ಈರುಳ್ಳಿ ದರ ಏರಿಕೆಯನ್ನು ಖಂಡಿಸಿ, ಎಲ್ಲರ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ಸಂಪ್ರದಾಯಬದ್ಧವಾಗಿ ಮದುವೆ ಸಮಾರಂಭಗಳಲ್ಲಿ ಹೂವಿನ ಹಾರು ಬದಲಾಯಿಸುವುದು ವಾಡಿಕೆ. ಆದರೆ, ಉತ್ತರ ಪ್ರದೇಶದ ನವಜೋಡಿ ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದ ತಯಾರಾದ ಹಾರವನ್ನು ಬದಲಾಯಿಸಿಕೊಳ್ಳುವ ಮೂಲಕ ದರ ಏರಿಕೆಯನ್ನು ಖಂಡಿಸಿದರು. ವಿಶೇಷವೆಂದರೆ ಮದುವೆಗೆ ಆಗಮಿಸಿದ್ದ ಅತಿಥಿಗಳು ಕೂಡ ಉಡುಗೊರೆಯಾಗಿ ಈರುಳ್ಳಿ ಬುಟ್ಟಿಯನ್ನು ತಂದಿದ್ದರು. ಇದೆಲ್ಲದರಿಂದ ಈ ಮದುವೆ ತುಂಬಾ ವಿಭಿನ್ನ ಎನಿಸಿಕೊಂಡಿತು.

ಮದುವೆ ಬಗ್ಗೆ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕ ಕಮಲ್​ ಪಟೇಲ್​, ಕಳೆದ ಒಂದು ತಿಂಗಳಿಂದ ಈರುಳ್ಳಿಯ ದರ ಗಗನವನ್ನು ಮುಟ್ಟುತ್ತಿದೆ. ಹೀಗಾಗಿ ಜನರು ಈರುಳ್ಳಿಯು ಕೂಡ ಚಿನ್ನದಂತೆ ಅಮೂಲ್ಯ ಎಂದು ಪರಿಗಣಿಸಲು ಶುರು ಮಾಡಿದ್ದಾರೆ. ಈ ಮದುವೆಯಲ್ಲಿ ವಧು-ವರ ಹಾರವನ್ನಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸಿದ್ದಾರೆ. ಕೆ.ಜಿ. ಈರುಳ್ಳಿ 120ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ಈರುಳ್ಳಿ ದರ ಏರಿಕೆಯನ್ನು ವಿರೋಧಿಸಲು ನೂತನ ವಧು-ವರರು ಈ ಅಸಾಮಾನ್ಯ ವಿಧಾನವನ್ನು ಆರಿಸಿದ್ದಾರೆ ಎಂದು ಮತ್ತೊಬ್ಬ ಸಮಾಜವಾದಿ ಪಕ್ಷದ ನಾಯಕ ಸತ್ಯ ಪ್ರಕಾಶ್​ ಅಭಿಪ್ರಾಯಪಟ್ಟಿದ್ದಾರೆ.

ಸಮಾಜವಾದಿ ಪಕ್ಷದ ನಾಯಕರ ಪ್ರಕಾರ ವಾರಾಣಸಿಯ ಮಾರುಕಟ್ಟೆಯಲ್ಲಿ ಈರುಳ್ಳಿ ದರ ನಿರಂತರವಾಗಿ ಏರಿಕೆ ಕಾಣುತ್ತಿದೆ.

LEAVE A REPLY

Please enter your comment!
Please enter your name here