ದೇಶದೆಲ್ಲೆಡೆ PUBG ಹುಚ್ಚು ಜೋರಾಗಿದ್ದು, ಇದೀಗ PUBG ಆಡಲು ಯುವಕನಿಗೆ ಮೊಬೈಲ್ ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಕುರ್ಲಾದ ನೆಹರು ನಗರದ ನಿವಾಸಿಯಾಗಿದ್ದ ಈ ಯುವಕ PUBG ಆಡಲು 37 ಸಾವಿರ ಮೌಲ್ಯದ ಹೈ-ಎಂಡ್ ಮೊಬೈಲ್ ಬೇಕು ಎಂದು ತನ್ನ ಮನೆಯವರ ಮುಂದೆ ಬೇಡಿಕೆ ಇಟ್ಟಿದ್ದಾನೆ.
ಆದರೆ ಕುಟುಂಬ ಸದಸ್ಯರು ಇಷ್ಟು ದೊಡ್ಡ ಮೊತ್ತ ಮೊಬೈಲ್ ಕೊಡಿಸಲು ಸಾಧ್ಯವಿಲ್ಲ. ಹೆಚ್ಚೆಂದರೆ 20 ಸಾವಿರ ರೂ. ಮೌಲ್ಯದ ಮೊಬೈಲ್ ಕೊಡಿಸುವುದಾಗಿ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನುವ ಮಾತುಗಳು ಕೇಳಿಬಂದಿದೆ.
ಅಡುಗೆ ಮನೆಯಲ್ಲಿದ್ದ ಫ್ಯಾನ್ ಗೆ ಯುವಕ ನೇಣು ಹಾಕಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿಗೆ PUBG ಆಟವೇ ಕಾರಣವೇ ಅಥವಾ ಇನ್ಯಾವುದಾದರೂ ಕಾರಣವಿದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಅನಾಹುತ ಒಂದು ಕಡೆಯಾಗುತ್ತಿದ್ದರೆ, ಇನ್ನೊಂದೆಡೆ PUBG ಆಟದಿಂದ ಮಕ್ಕಳ ಮೇಲೆ ನಕಾರಾತ್ಮಕ ಪ್ರಭಾವ ಹೆಚ್ಚಾಗುತ್ತಿದೆ ಎನ್ನುವ ಆರೋಪವೂ ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ.