“ಜಲೀಲ’ನ ಕುದುರೆ ಪ್ರೇಮದ ಕಥೆ” ಸಾಯೋ ವೇಳೆ ಉಳಿದದ್ದು ಒಂದೇ ಕುದುರೆ !

0
352

ನಟ ಅಂಬರೀಶ್‌ ಕುದುರೆ ಪ್ರೇಮಿ. ವರ್ಣರಂಜಿತ ಸಿನಿಮಾ ಬದುಕನ್ನು ಎಷ್ಟು ಇಷ್ಟ ಪಡುತ್ತಿದ್ದರೋ ರೇಸ್‌ ಕುದುರೆಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿಯೇ ಪ್ರೀತಿಸುತ್ತಿದ್ದರು. ಯಾರಾದರೂ ಅಪ್ಪಿತಪ್ಪಿ “ಸರ್‌… ನೀವು ರೇಸ್‌ ಆಡ್ತಿರಾ?’ ಅಂದರೆ ಅಂಬಿಗೆ ಸಿಟ್ಟು ನೆತ್ತಿಗೇರುತ್ತಿತ್ತು. “ಲೇ… ನಾನು ಜೂಜು ಆಡಲ್ಲ ಕಣಪ್ಪ…ಕುದುರೆಗಳನ್ನು ಪ್ರೀತಿಸುತ್ತೀನಿ… ನಿಂಗ್‌ ಏನ್‌ ಕಷ್ಟ’ ಎಂದು ಖಡಕ್‌ ಆಗಿ ಉತ್ತರಿಸುತ್ತಿದ್ದರು. ಹೀಗಂತ ಹೇಳಿದ್ದು ಬೇರಾರು ಅಲ್ಲ. ಬಹುಕಾಲದ ಗೆಳೆಯ. ಅಂಬಿ ಆಪ್ತಮಿತ್ರ, ನೆಚ್ಚಿನ ಕುದುರೆಗಳ ಮೇಲ್ವಿಚಾರಕ ವಾರನ್‌ ಸಿಂಗ್‌.

ಕುದುರೆ ರೇಸ್‌, ರೇಸ್‌ ಕೋರ್ಸ್‌ ಅಂತ ವಿಷಯ ಬಂದರೆ ಅಂಬರೀಶ್‌ಗೆ ವಾರನ್‌ ಸಿಂಗ್‌ ಮೊದಲು ನೆನಪಾಗುತ್ತಾರೆ. 1984ರಲ್ಲಿ ಬೆಂಗಳೂರಿನಲ್ಲಿ ಕುದುರೆ ಜಾಕಿಯಾಗಿದ್ದ ಕೋಲ್ಕತಾ ಮೂಲದ ವಾರನ್‌ ಕಂಡರೆ ಅಂಬಿಗೆ ಅಚ್ಚುಮೆಚ್ಚು. ಇನ್ನಿಲ್ಲದ ಪ್ರೀತಿ. ಸಿನಿಮಾ ರಂಗವನ್ನು ಹೊರತಾಗಿ ವಾರನ್‌ರನ್ನೇ ಅಂಬಿ ಹೆಚ್ಚು ಇಷ್ಟಪಡುತ್ತಿದ್ದರು. ಅಷ್ಟರ ಮಟ್ಟಿಗೆ ಗಾಢವಾಗಿತ್ತು ಅಂಬಿ-ವಾರನ್‌ ನಡುವಿನ ಗೆಳೆತನ. ಶೂಟಿಂಗ್‌ ಮುಗಿಯುತ್ತಲೇ ಬೆಂಗಳೂರಿನ ರೇಸ್‌ ಕೋರ್ಸ್‌ಗೆ ಅಂಬಿ ಓಡೋಡಿ ಬರುತ್ತಿದ್ದರು. ಬಂದ ತಕ್ಷಣ ಮೊದಲು ಹುಡುಕುವುದು ವಾರನ್‌ರನ್ನು. ಆಗ ಥಟ್‌ ಅಂತ ವಾರನ್‌ ಪ್ರತ್ಯಕ್ಷವಾಗಬೇಕು. ಒಂದು ವೇಳೆ ವಾರನ್‌ ಕಾಣಿಸಿಕೊಳ್ಳದಿದ್ದರೆ ಅಂಬಿ ಸಿಟ್ಟಾಗುತ್ತಿದ್ದರು.

“ಲೇ…ಕರೊಡು ಬನ್ರಿ ಅವನ್ನ’ ಎಂದು ಅವಾಜ್‌ ಬಿಡುತ್ತಿದ್ದರು. ಅಂಬಿ ಸ್ವಭಾವತಃ ಗಡಸು ವ್ಯಕ್ತಿತ್ವ ಇರಬಹುದು. ಆದರೆ ಅವರ ಮನಸ್ಸು ಹಾಲಿನಂತೆ. ಪ್ರತಿ ಬೈಗುಳದಲ್ಲೂ ಪ್ರೀತಿ ಇರುತ್ತಿತ್ತು. ಇದು ವಾರನ್‌ ಮಾತು. ಒಟ್ಟಾರೆ “ಜಲೀಲ’ನ ಕುದುರೆ ಪ್ರೇಮದ ಕಥೆಯನ್ನು ಉದಯವಾಣಿಗೆ ವಾರನ್‌ ಹಂಚಿಕೊಂಡಿದ್ದಾರೆ. ಇಹಲೋಕ ತ್ಯಜಿಸುವುದಕ್ಕೂ ಮೊದಲು ಅಂಬಿ ಬಳಿಯಲ್ಲಿ ಕೇವಲ 1
ಕುದುರೆಯಷ್ಟೇ ಉಳಿದಿತ್ತು ಎನ್ನುವ ಮಾಹಿತಿಯನ್ನು ನೀಡುತ್ತಾ ಕಣ್ಣೀರಿಟ್ಟರು ವಾರನ್‌. ಮುಂದೆ ವಾರನ್‌ ಅವರದೇ ಮಾತುಗಳಲ್ಲಿ ವಿವರಿಸಲಾಗಿದೆ.

“ಮೈ ಆ್ಯಂಬಿಷನ್‌’ ಮೊದಲ ಕುದುರೆ: 1984ರಲ್ಲಿ ಅಂಬರೀಶ್‌ ನನಗೆ ಪರಿಚಯವಾದರು.ಸಿನಿಮಾರಂಗದಲ್ಲಿ ಪ್ರಬುದಟಛಿ ನಟರಾಗಿ ಆಗಲೇ ಗುರುತಿಸಿಕೊಂಡಿದ್ದರು. ನಮ್ಮಿಬ್ಬರ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿತು. ಆಮೇಲೆ ಕುಟುಂಬ ಸದಸ್ಯರಲ್ಲಿ ನಾನೂ ಒಬ್ಬನಾದೆ.

ನಮ್ಮಿಬ್ಬರ ಒಡನಾಟ ಇಂದು ನಿನ್ನೆಯದಲ್ಲ. ಬರೋಬ್ಬರಿ 3 ದಶಕಗಳದ್ದು. 1984ರಲ್ಲಿ ಅಂಬರೀಶ್‌ ಮೊದಲ ಸಲ ರೇಸ್‌ ಕುದುರೆ ಖರೀದಿಸಿದರು.”ಗಂಧದ ಗುಡಿ’ ಸಿನಿಮಾ ನಿರ್ದೇಶಕ ಎಂ.ಪಿ.ಶಂಕರ್‌ ಜತೆಗೂಡಿ ಖರೀದಿಸಿದ ರೇಸ್‌ ಕುದುರೆಗೆ “ಮೈಆ್ಯಂಬಿಷನ್‌’ ಎಂದು ಅಂಬಿ ಹೆಸರಿಟ್ಟಿದ್ದರು ಎಂದು ವಾರನ್‌ ನೆನಪಿಸಿಕೊಂಡರು.

ಕನ್ವರ್‌ಲಾಲ್‌ ಎಂದೂ ಜೂಜು ಆಡಿಲ್ಲ: ಎಷ್ಟೋ ಮಂದಿ ಅಂಬಿ ಜೂಜು ಆಡ್ತಾರೆ ಅಂತ ತಪ್ಪು ಕಲ್ಪನೆ ಹೊಂದಿದ್ದಾರೆ. ಅಂಬಿ ಓರ್ವ ಕ್ರೀಡಾ ಪ್ರೇಮಿ. ರೇಸ್‌ ಕುದುರೆ ಖರೀದಿಸುವ ಹವ್ಯಾಸವಿತ್ತೆ ಹೊರತು ಅವರೆಂದಿಗೂ ಜೂಜು ಆಡುತ್ತಿರಲಿಲ್ಲ. ಪ್ರತಿ ರೇಸ್‌ ಕುದುರೆಗಳನ್ನು ಮಗುವಿನಂತೆ ಪ್ರೀತಿಸುತ್ತಿದ್ದರು. ಹೆಚ್ಚಾಗಿ ಸಹಭಾಗಿತ್ವದಲ್ಲೇ ಕುದುರೆ ಖರೀದಿಸುತ್ತಿದ್ದರು. “ಬೂದು” ಬಣ್ಣದ ಕುದುರೆ ಯನ್ನು ಹೆಚ್ಚು ಇಷ್ಟಪಡುತ್ತಿದ್ದರು ಎಂದರು ವಾರನ್‌.

ಸಾಯೋ ವೇಳೆ ಉಳಿದದ್ದು ಒಂದೇ ಕುದುರೆ!:
1984ರಲ್ಲಿ “ಮೈ ಆ್ಯಂಬಿಷನ್‌’ ಅಂಬಿ ಖರೀದಿಸಿದ ಮೊದಲ ರೇಸ್‌ ಕುದುರೆ. ಇದರ ಬಳಿಕ ಒಟ್ಟಾರೆ ಅಂಬರೀಶ್‌ ವಿದೇಶಗಳಿಂದ 30ಕ್ಕೂ ಹೆಚ್ಚು ಕುದುರೆ ಖರೀದಿಸಿದ್ದಾರೆ. ಬೆಂಗಳೂರು ಡರ್ಬಿ ಸೇರಿದಂತೆ ಪ್ರಮುಖ ಕೂಟಗಳಲ್ಲಿ ಇವರ ಕುದುರೆಗಳು 50ಕ್ಕೂ ಹೆಚ್ಚು ಪ್ರಶಸ್ತಿ ಗೆದಿವೆ.ಅಂಬಿಗೆ ಕುದುರೆ ಬಗ್ಗೆ ವಿಶೇಷ ಕಾಳಜಿ. ಕುದುರೆ ಗಾಯಗೊಂಡಾಗ ನೊಂದುಕೊಳ್ಳುತ್ತಿದ್ದರು. ಅದರ ಚಿಕಿತ್ಸೆಗೆ ಬೇಕಾದ ಕ್ರಮಕ್ಕೆ ಸೂಚನೆ ನೀಡುತ್ತಿದ್ದರು. ಅಂತಹ ಅಂಬಿ ಸಾಯೋ ಹೊತ್ತಿನಲ್ಲಿ ಕೇವಲ 1 ಕುದುರೆಯಷ್ಟೇ ಉಳಿಸಿಕೊಂಡಿದ್ದರು.

ಅನಾರೋಗ್ಯದ ಹಿನ್ನಲೆಯಲ್ಲಿ ಅವರು ರೇಸ್‌ನಿಂದ ಸ್ವಲ್ಪ ದೂರ ಉಳಿದಿದ್ದರು. “ಸ್ಪೀಡ್‌ ಹಾಕ್‌’ ಅವರ ಕೊನೆ ರೇಸ್‌ ಕುದುರೆ. ಅವರಿಲ್ಲದೆ ರೇಸ್‌ಕೋರ್ಸ್‌ ಬರಿದಾಗಿದೆ. ಕುದುರೆಗಳು ಮೂಕವಾಗಿ ರೋಧಿಸುತ್ತಿವೆ ಎಂದರು ವಾರನ್‌.

LEAVE A REPLY

Please enter your comment!
Please enter your name here